ನಾಗೇಶ್ವರರಾವ್, ಎ	
1924- ತೆಲುಗು ಚಿತ್ರನಟ, ನಿರ್ಮಾಪಕ. ಆಂಧ್ರದ ಕೃಷ್ಣ ಜಿಲ್ಲೆ ಗುಡಿವಾಡ ತಾಲ್ಲೂಕು ವೆಂಕಟರಾಘವಪುರದಲ್ಲಿ 1924 ಸೆಪ್ಟೆಂಬರ್ 20ರಂದು ಜನಿಸಿದರು. ತಂದೆ ಅಕ್ಕಿನೇನಿ ವೆಂಕಟರತ್ನಂ. ಎಳೆಯಂದಿನಿಂದಲೇ ಕಲಾಭಿರುಚಿ ಇದ್ದು ಶಾಲಾನಾಟಕಗಳಲ್ಲೂ ಕಂಪೆನಿ ನಾಟಕಗಳಲ್ಲಿಯೂ ಅಭಿನಯಿಸಿ ಹೆಸರು ಮಾಡಿದರು. ತಾರುಣ್ಯದಲ್ಲೇ ಮದರಾಸಿಗೆ ಬಂದರು. ಸಿ ಪುಲ್ಲಯ್ಯ ನಿರ್ಮಿಸಿದ ಧರ್ಮಪತ್ನಿ (1941) ಇವರ ಮೊದಲ ಚಿತ್ರ. ಅದರಲ್ಲಿ ಇವರು ಬಾಲನಟ. ಅನಂತರ ಸೀತಾರಾಮ ಜನನಂ ಚಿತ್ರದಲ್ಲಿ ರಾಮನಾಗಿ ಮೊದಲ ಪ್ರೌಢ ಪಾತ್ರ ದೊರೆಯಿತು. ಘಂಟಸಾಲ ಬಾಲ ರಾಮಯ್ಯ ನಿರ್ಮಿಸಿದ ಬಾಲರಾಜು (1948) ಚಿತ್ರದಲ್ಲಿ ಎಸ್. ವರಲಕ್ಷ್ಮಿಯೊಂದಿಗೆ ಅಭಿನಯಿಸಿದರು. ಈ ಚಿತ್ರ ಜನಪದ ಶೈಲಿಯ ಚಿತ್ರ. ಪರಂಪರೆಗೆ ನಾಂದಿಯಾಯಿತು. ಇವರ ನಾಟಕ ಪ್ರತಿಭೆಯನ್ನು ಪ್ರಕಟಪಡಿಸಿದ ಚಿತ್ರಗಳೆಂದರೆ ದೇವದಾಸ್ (1953), ಲೈಲಾಮಜ್ನು, ಬಾಟಸಾರಿ ತೆಲುಗು ಚಿತ್ರರಂಗದಲ್ಲಿ ಇವರು ಅಭಿನಯಿಸಿದ ಚಿತ್ರಗಳೆಲ್ಲಾ ಬಹುತೇಕ ಯಶಸ್ವಿ ಚಿತ್ರಗಳೇ.

   	ಇವರು ಅಭಿನಯಿಸಿರುವ ಸುಮಾರು 20 ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದಿವೆ. ಮೂಗಮನಸುಲು (1964), ಅಂತಸ್ಥಲು (1965), ಆಸ್ತಿಪರುಲು (1966), ಸುಡಿಗುಂಡೆಲು (1968) ಚಿತ್ರಗಳು ಉತ್ತಮ ಚಿತ್ರಗಳೆಂದು ಫಿಲ್ಮ್‍ಫೇರ್ ಪ್ರಶಸ್ತಿ ಗಳಿಸಿವೆ. ಆಂಧ್ರ ಸರ್ಕಾರದ ಬಂಗಾರದನಂದಿ ಪ್ರಶಸ್ತಿ ಪಡೆದ ಚಿತ್ರಗಳೆಂದರೆ ಡಾ. ಚಕ್ರವರ್ತಿ (1964), ಅಂತಸ್ಥಲು (1965), ಸುಡಿಗುಂಡೆಲು (1968). ಇವರ `ನಮ್ಮಿನ ಬಂಟು ಸ್ಪೇನಿನಲ್ಲಿ ಜರುಗಿದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ `ಅಂತಸ್ಥಲು ಆಸ್ಟ್ರೇಲಿಯಾದಲ್ಲಿ ನಡೆದ ಸಿಡ್ನಿ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿವೆ. ಆಂಧ್ರಪ್ರದೇಶ ಹಾಗೂ ಮದರಾಸಿನ ಚಲನಚಿತ್ರ ಪ್ರೇಮಿ ಸಂಘಗಳು ಇವರನ್ನು ಸನ್ಮಾನಿಸಿವೆ; ಅನೇಕ ತೆಲುಗು ವಾರಪತ್ರಿಕೆಗಳು ನಡೆಸಿದ ಫಿಲ್ಮ್‍ಬ್ಯಾಲಟ್‍ಗಳಲ್ಲಿಯೂ ಇವರನ್ನು ಉತ್ತಮ ನಟನೆಂದು ತೀರ್ಮಾನಿಸಲಾಗಿದೆ. ಇವರಿಗೆ ನಟಸಮ್ರಾಟನೆಂಬ ಬಿರುದು ಬಂದಿದೆ. ಇವರ ಇತರ ಚಿತ್ರಗಳೆಂದರೆ ಬುದ್ಧಿಮಂತುಡು (1970), ಇದ್ದರು ಅಮ್ಮಾಯಿಲು (1971), ರೈತು ಕುಟುಂಬಂ (1972),  ಬಂಗಾರುಬಾಬು (1973), ಚಕ್ರಧಾರಿ (1977), ಚಾಣಕ್ಯ ಚಂದ್ರಗುಪ್ತ (1978), ಶ್ರೀರಾಮರಕ್ಷ (1979), ಗುರುಶಿಷ್ಯುಲು (1981), ಪ್ರೇಮಸಿಂಹಾಸನಂ (1982), ಮೇಘ ಸಂದೇಶಂ (1983) ಮುಂತಾದವು.
 
  	ತೆಲುಗು ಚಿತ್ರರಂಗವನ್ನು ಅಭಿವೃದ್ದಿಗೊಳಿಸುವ ಉದ್ದೇಶದಿಂದ ಇವರು 1964ರಲ್ಲಿ ಇವರು ಹೈದರಾಬಾದಿಗೆ ಬಂದು ನೆಲೆಸಿದರು. ಆಂಧ್ರದಲ್ಲೇ ತೆಗೆದ ಇವರ ಚಿತ್ರಗಳಿಗೆ ಸರ್ಕಾರ ಸಹಾಯಧನ ನೀಡಿದೆ. ಅಲ್ಲದೆ ಉತ್ತಮ ಚಿತ್ರಗಳಿಗೆ, ತಂತ್ರಜ್ಞತೆಗೆ ಪ್ರಶಸ್ತಿಪ್ರಧಾನ ಮೊದಲಾದವುಗಳಿಗೆ ಇವರೇ ಮೂಲಪ್ರೇರಕರಾಗಿದ್ದರು.

   	ಸ್ವತಃ ನಿರ್ಮಾಪಕರಾಗಿರುವ ಇವರು ಡಿ. ಮಧುಮಾಧವರಾವ್ ಜತೆಗೂಡಿ ಅನ್ನಪೂರ್ಣ ಪಿಕ್ಚರ್ಸ್ ಎಂಬ ಸ್ವಂತ ಚಿತ್ರಸಂಸ್ಥೆಯ ಲಾಂಛನದಲ್ಲಿ 18 ಚಿತ್ರಗಳನ್ನು ನಿರ್ಮಿಸಿದರು. ಅನಂತರ ಚಕ್ರವರ್ತಿ ಚಿತ್ರಲಾಂಚನದಡಿಯಲ್ಲಿ ಅದರ್ತಿ ಸುಬ್ಬರಾವ್ ಜೊತೆ ಸೇರಿ ಸುಡಿಗುಂಡೆಲು, ಮರೋ ಪ್ರಪಂಚಮು ಎಂಬ ಎರಡು ಚಿತ್ರಗಳನ್ನು ತಯಾರಿಸಿದರು. ಆಂಧ್ರಪ್ರದೇಶದಲ್ಲಿನ ಅತ್ಯಂತ ಆಧುನಿಕ ಸ್ಟುಡಿಯೋ ಅನ್ನಪೂರ್ಣ ಇವರ ಸ್ವಂತ ಸಂಸ್ಥೆ; 1976ರಲ್ಲಿ ಉದ್ಘಾಟನೆಯಾದದ್ದು. ಚಿತ್ರರಂಗಕ್ಕೆ ಇವರು ಸಲ್ಲಿಸಿರುವ ಸೇವೆಗೆ ಮನ್ನಣೆ ನೀಡಿ ಕೇಂದ್ರಸರಕಾರ 1968ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತು. ನಂತರ 1990ರಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಭಾರತದ ಸಾಂಸ್ಕøತಿಕ ಪ್ರತಿನಿಧಿಯಾಗಿ 1964ರಲ್ಲಿ ಇವರು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸಂಚರಿಸಿ ಬಂದರು. ಇವರ ಮಗ ನಾಗಾರ್ಜುನ ತೆಲುಗು ಚಿತ್ರರಂಗದ ನಾಯಕ.

   	ತಮ್ಮ ಪತ್ನಿ ಶ್ರೀಮತಿ ಅನ್ನಪೂರ್ಣ ಅವರೊಂದಿಗೆ ಹೈದರಾಬಾದಿನಲ್ಲಿ ನೆಲೆಸಿರುವ ಇವರು ಉದ್ಯಮಿಗಳೂ ಆಗಿದ್ದಾರೆ. ಏಲೂರಿನಲ್ಲಿ ಅನ್ನಪೂರ್ಣ ಪಲ್ವರೈಜಿಂಗ್ ಮಿಲ್ಸ್ ಎಂಬ ಫ್ಲೋರ್‍ಮಿಲ್‍ನ ಮಾಲಿಕತ್ವ ಇವರದು. ಅಕ್ಕಿನೇನಿಕಳಾಶಾಲಲು ಇವರದೇ. ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಅಪಾರ ಕಾಳಜಿ ಇರುವ ಇವರು ಆಂಧ್ರ, ಮದರಾಸು ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ಬಹಳಷ್ಟು ಹಣವನ್ನು ದತ್ತು ನೀಡಿದ್ದಾರೆ. ಇವರು ಆಂಧ್ರ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರೂ ಆಗಿದ್ದಾರೆ.	
											(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ